ಅಡಿಕೆ ಪುಡಿ / Sweet Supari

ಮಸಾಲ ಅಡಿಕೆ ಪುಡಿ
ಬೇಕಾಗಿರುವ ಪದರ್ಥಗಳು:
ಚಿಕಣಿ ಅಡಿಕೆ (ಎಳೆ ಅಡಿಕೆ ಬೇಯಿಸಿ, ಒಣಗಿಸಿರುವುದು) ಪುಡಿ – ೩೦೦ ಗ್ರಾಂ
ಲವಂಗ - ೮-೧೦
ಏಲಕ್ಕಿ – 8-10
ಜಾಪತ್ರೆ ಪುಡಿ – ೧/೪ ಚಮಚ
ತುಪ್ಪ- ೨ ಚಮಚ
ಒಣ ಕೊಬ್ಬರಿ ತುರಿ – ೧/೨ ಬಟ್ಟಲು
ಪಚ್ಚಕರ್ಪೂರದ ಪುಡಿ – ೧/೨ ಚಮಚ
ಇಷ್ಟವಾಗುವುದಾದರೆ ಈ ಕೆಳಗಿನ ಸಾಮಾಗ್ರಿಗಳನ್ನು ಬಳಸಬಹುದು:
Diamond ಸಕ್ಕರೆ – ೨೫ ಗ್ರಾಂ
ಸೋಂಪು ಬೀಜಗಳು – ೨೫ ಗ್ರಾಂ
ಕಲ್ಲಂಗಡಿ ಬೀಜಗಳು – ೨೫ ಗ್ರಾಂ
ಮಾಡುವ ವಿಧಾನ:ಮೊದಲು ಅಡಿಕೆ ಪುಡಿ, ಲವಂಗ, ಜಾಪತ್ರೆ, ಏಲಕ್ಕಿ ಇವುಗಳನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು. ಹುರಿದಿಟ್ಟ ಲವಂಗ, ಜಾಪತ್ರೆ, ಪಚ್ಚಕರ್ಪೂರದ ಪುಡಿಯನ್ನು, ಏಲಕ್ಕಿಗಳನ್ನು ಸೇರಿಸಿ ನುಣ್ಣಗೆ ಪುಡಿಮಾಡಿಕೊಳ್ಳಿ. ಒಂದು ಸಣ್ಣ ಬಾಣಲೆಯಲ್ಲಿ ತುಪ್ಪವನ್ನು ಕಾಯಿಸಿ, ಅದಕ್ಕೆ ಅಡಿಕೆ ಪುಡಿಯನ್ನು ಹಾಕಿ ಚನ್ನಾಗಿ ಗಮಬರುವವರೆಗು ಹುರಿಯಿರಿ. ಒಲೆಯಿಂದ ಕೆಳಗೆ ಇಳಿಸಿದ ನಂತರ ಅದಕ್ಕೆ ಮೊದಲು ಮಾಡಿಟ್ಟಿರುವ ಮಿಶ್ರಣವನ್ನು, ಒಣ ಕೊಬ್ಬರಿ ತುರಿಯನ್ನು ಸೇರಿಸಿ, ಚನ್ನಾಗಿ ಕಲೆಸಿ, ಆರಲು ಬಿಡಿ. ತಣ್ಣಗಾದ ನಂತರ ಡಬ್ಬಿಯಲ್ಲಿ ಹಾಕಿಡಿ, ಬಹಳದಿನಗಳವರೆಗು ಕೆಡದೆ ಚನ್ನಾಗಿರುತ್ತದೆ.

ಸಿಹಿ ಅಡಕೆ ಪುಡಿ:
ಬೇಕಾಗಿರುವ ಪದರ್ಥಗಳು:
ಚಿಕಣಿ ಅಡಿಕೆ ಪುಡಿ – ೩೦೦ ಗ್ರಾಂ
ಲವಂಗ - ೮-೧೦
ಏಲಕ್ಕಿ – 8-10
ಸಕ್ಕರೆ – ೧/೨ ಬಟ್ಟಲು
ಒಣ ಕೊಬ್ಬರಿ ತುರಿ – ೧/೨ ಬಟ್ಟಲು
ಪಚ್ಚಕರ್ಪೂರದ ಪುಡಿ – ೧/೨ ಚಮಚ
Diamond ಸಕ್ಕರೆ – ೨೫ ಗ್ರಾಂ
ಸೋಂಪು ಬೀಜಗಳು – ೨೫ ಗ್ರಾಂ
ಕಲ್ಲಂಗಡಿ ಬೀಜಗಳು – ೨೫ ಗ್ರಾಂ
ಮಾಡುವ ವಿಧಾನ:ಸಿಹಿ ಅಡಕೆ ಪುಡಿಯನ್ನು ೨ ವಿಧಾನಗಳಲ್ಲಿ ಮಾಡಬಹುದು. ಒಂದು ಸ್ವಲ್ಪ ಮೆತ್ತಗೆ ಇರುತ್ತದೆ, ಮತ್ತೊಂದು ಗಟ್ಟಿಯಾಗಿ ಇರುತ್ತದೆ.
ಮೆತ್ತಗಿನ ಸಿಹಿ ಅಡಕೆ ಪುಡಿ:ಸಾಮಾನ್ಯವಾಗಿ ಮೆತ್ತಗಿನ ಸಿಹಿ ಅಡಕೆ ಪುಡಿ ಮಾಡಲು ಹಾಲನ್ನು ಬಳಸುತ್ತಾರೆ. ಮೊದಲು ಅಡಿಕೆ ಪುಡಿಯನ್ನು ಹಾಲಿನಲ್ಲಿ ಬೇಯಿಸಿಕೊಳ್ಳಬೇಕು. ಅಡಿಕೆ ಸ್ವಲ್ಪ ಮೆತ್ತಗಾದ ನಂತರ, ಅದನ್ನು ಹಾಲಿನ ಪಾತ್ರೆಯಿಂದ ಹಿಂಡಿ ತೆಗೆದುಕೊಳ್ಳಬೇಕು. ಒಂದು ಸಣ್ಣ ಬಾಣಲೆಯಲ್ಲಿ ತುಪ್ಪವನ್ನು ಕಾಯಿಸಿ, ಅದಕ್ಕೆ ಹಾಲಿನಿಂದ ಹಿಂಡಿ ತೆಗೆದ ಅಡಕೆ ಪುಡಿಯನ್ನು ಹಾಕಿ ಚನ್ನಾಗಿ ಹುರಿಯಿರಿ. ನಂತರ ಲವಂಗ, ಏಲಕ್ಕಿಗಳನ್ನು ಪ್ರತ್ಯೇಕವಾಗಿ ಹುರಿದುಕೊಂಡು, ಪಚ್ಚಕರ್ಪೂರದ ಪುಡಿ ಮತ್ತು ಸಕ್ಕರೆಯ ಜೊತೆ ಸೇರಿಸಿ ನುಣ್ಣಗೆ ಪುಡಿಮಾಡಿಕೊಳ್ಳಿ. ಈ ಮಿಶ್ರಣವನ್ನು ಹುರಿದಿಟ್ಟ ಅಡಿಕೆ ಪುಡಿಯೊಂದಿಗೆ ಸೇರಿಸಿ, ಚನ್ನಾಗಿ ಕಲೆಸಿದ ನಂತರ Diamond ಸಕ್ಕರೆ, ಒಣ ಕೊಬ್ಬರಿ ತುರಿ, ಸೋಂಪು ಬೀಜಗಳು, ಕಲ್ಲಂಗಡಿ ಬೀಜಗಳನ್ನು ಸೇರಿಸಿ, ಆರಲು ಬಿಡಿ. ತಣ್ಣಗಾದ ನಂತರ ಡಬ್ಬಿಯಲ್ಲಿ ಹಾಕಿಡಿ, ಬಹಳದಿನಗಳವರೆಗು ಕೆಡದೆ ಚನ್ನಾಗಿರುತ್ತದೆ.
ಗಟ್ಟಿ ಸಿಹಿ ಅಡಕೆ ಪುಡಿ:ಮೊದಲು ಅಡಿಕೆ ಪುಡಿ, ಲವಂಗ, ಏಲಕ್ಕಿ ಇವುಗಳನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು. ಹುರಿದಿಟ್ಟ ಲವಂಗ, ಏಲಕ್ಕಿಗಳನ್ನು ಸಕ್ಕರೆ ಮತ್ತು ಪಚ್ಚಕರ್ಪೂರಗಳ ಜೊತೆ ಸೇರಿಸಿ ನುಣ್ಣಗೆ ಪುಡಿಮಾಡಿಕೊಳ್ಳಿ. ಒಂದು ಸಣ್ಣ ಬಾಣಲೆಯಲ್ಲಿ ತುಪ್ಪವನ್ನು ಕಾಯಿಸಿ, ಅದಕ್ಕೆ ಅಡಿಕೆ ಪುಡಿಯನ್ನು ಹಾಕಿ ಚನ್ನಾಗಿ ಗಮಬರುವವರೆಗು ಹುರಿಯಿರಿ. ಒಲೆಯಿಂದ ಕೆಳಗೆ ಇಳಿಸಿದ ನಂತರ ಅದಕ್ಕೆ ಮೊದಲು ಮಾಡಿಟ್ಟಿರುವ ಮಿಶ್ರಣವನ್ನು, Diamond ಸಕ್ಕರೆ, ಒಣ ಕೊಬ್ಬರಿ ತುರಿ, ಸೋಂಪು ಬೀಜಗಳು, ಕಲ್ಲಂಗಡಿ ಬೀಜಗಳನ್ನು ಸೇರಿಸಿ, ಚನ್ನಾಗಿ ಕಲೆಸಿ, ಆರಲು ಬಿಡಿ. ತಣ್ಣಗಾದ ನಂತರ ಡಬ್ಬಿಯಲ್ಲಿ ಹಾಕಿಡಿ, ಬಹಳದಿನಗಳವರೆಗು ಕೆಡದೆ ಚನ್ನಾಗಿರುತ್ತದೆ.

ನೆನಪಿಡಬೇಕಾದ ಅಂಶ :ಜಾಸ್ತಿ ಪ್ರಮಾಣದಲ್ಲಿ ಅಡಿಕೆ ಪುಡಿಯನ್ನು ಸೇವಿಸಬೇಡಿ, ಇದರಿಂದ ಕಫ ಆಗುತ್ತದೆ. ಅಡಕೆ ಪುಡಿಯನ್ನು ಯಾವಾಗಲೂ ವೀಳ್ಯದ ಎಲೆ ಜೊತೆಗೆ ಸೇವಿಸಿ, ಅದು ನಿಮ್ಮ ಆರೋಗ್ಯಕ್ಕೂ ಉತ್ತಮ.