ಸಜ್ಜೆ ರೊಟ್ಟಿ / Sajje Rotti / Bajra Roti

ಹೆಚ್ಚಿನ ಸಾಮನು ಕೇಳದ ಆದರೆ ಸಹನೆ ಮತ್ತು ಸಮಯ ಎರಡನ್ನೂ ಬಯಸುವ ಸಜ್ಜೆ ರೊಟ್ಟಿ ಮಾಡುವ ವಿಧಾನ.
ಬೇಕಾಗುವ ಸಾಮಾನುಗಳು:
ಸಜ್ಜೆ ಹಿಟ್ಟು – ೨ ಬಟ್ಟಲು
ಉಪ್ಪು – ೧/೪ ಚಮಚ
ಬಿಸಿನೀರು – ೧.೨೫ ಬಟ್ಟಲು.
ಮಾಡುವ ವಿಧಾನ:
ಸಜ್ಜೆ ಹಿಟ್ಟಿಗೆ ಉಪ್ಪು, ಬಿಸಿನೀರು ಹಾಕಿ ಚನ್ನಾಗಿ ಕಲೆಸಿ, ನಾದಿಕೊಳ್ಳಿ. Gluten ಎಂಬ ಪದಾರ್ಥ ಸಜ್ಜೆಹಿಟ್ಟಿನಲ್ಲಿ ಕಮ್ಮಿಯಾಗಿರುವುದರ ಪರಿಣಾಮವಾಗಿ ಕಲೆಸಿಕೊಂಡ ಹಿಟ್ಟು ಚಪಾತಿ ಹಿಟ್ಟಿನಂತೆ ಮೃದುವಾಗಿರುವುದಿಲ್ಲ. ಹೀಗೆ ಕಲಸಿದ ಹಿಟ್ಟನ್ನು ಒಂದು ಒದ್ದೆಬಟ್ಟೆಯಲ್ಲಿ ಕಟ್ಟಿ ಅರ್ಧಗಂಟೆ ಇಡಿ.
ಅರ್ಧಗಂಟೆಯ ನಂತರ ಕಲೆಸಿದ ಹಿಟ್ಟನ್ನು ಸಣ್ಣ ಹಿಟ್ಟಿನ ಉಂಡೆಗಳಾಗಿ ಮಾರ್ಪಡಿಸಿ. ಹಳೆಯ ಸಂಪ್ರದಾಯದ ಪ್ರಕಾರ ಸಜ್ಜೆರೊಟ್ಟಿಯನ್ನು ಕೈಯಲ್ಲೆ ತಟ್ಟಿ ಮಾಡಬೇಕು (ಜೋಳದ ರೊಟ್ಟಿಯ ತರ). ಆ ರೀತಿ ಕಷ್ಟ ಅನಿಸಿದರೆ, ಹಿಟ್ಟಿನ ಉಂಡೆಯನ್ನು ೨ ಪ್ಲಾಸ್ಟಿಕ್ ಹಾಳೆಗಳ ಮಧ್ಯ ಇಟ್ಟು ಚಪತಿಯಂತೆ ಲಟ್ಟಿಸಿಕೊಳ್ಳಬಹುದು. ಕೈಯಲ್ಲೆ ರೊಟ್ಟಿ ತಟ್ಟುವುದಾದರೆ ಕೈಗೆ ನೀರನ್ನು ಹಚ್ಚಿಕೊಂಡು ತಟ್ಟಿದರೆ ಸುಲಭವಾಗುತ್ತದೆ.
ಒಂದು ಕಾವಲಿಯನ್ನು (ತವಾ/ಹೆಂಚು) ಒಲೆಯ ಮೇಲಿಟ್ಟು ಬಿಸಿಮಾಡಿಕೊಳ್ಳಿ. ಕಾವಲಿ ಕಾದನಂತರ ಲಟ್ಟಿಸಿಕೊಂಡ ರೊಟ್ಟಿಯನ್ನು ಅದರಮೇಲೆ ಹಾಕಿ. ಚಪಾತಿಗೆ ಎಣ್ಣೆ ಸವರುವಂತೆ ಬೇಯುತ್ತಿರುವ ರೊಟ್ಟಿಯ ಮೇಲೆ ನೀರನ್ನು ಸವರಿ, ರೊಟ್ಟಿಯ ಎರಡೂ ಕಡೆ ಬೇಯಿಸಿಕೊಳ್ಳಿ. ಒಂದು ರೊಟ್ಟಿ ಚನ್ನಾಗಿ ಬೇಯಲು ೩ ನಿಮಿಷ ಸಾಕಾಗುತ್ತದೆ.
ಬಿಸಿ ಬಿಸಿ ಸಜ್ಜೆ ರೊಟ್ಟಿಯ ಜೊತೆ ನೆಂಚಿಕೊಳ್ಳಲು ಬೆಳ್ಳುಳ್ಳಿ ಚಟ್ನಿ ಮತ್ತು ಬೆಣ್ಣೆ ಬಳಸಿ.

ಸಲಹೆ: ಹಿಟ್ಟನ್ನು ಮೃದುವಾಗಿಸಲು ೧/೨ ಬಟ್ಟಲು ಗೋದಿಹಿಟ್ಟನ್ನು ಬಳಸಬಹುದು.

0 comments: